ಉತ್ಪಾದನ ವೆಚ್ಚ-
	ಸರಕುಗಳು ಕಾರ್ಖಾನೆಯಲ್ಲಿ ತಯಾರಾಗಿ ಮಾರಾಟಕ್ಕೆ ಸಿದ್ಧವಾಗುವ ಘಟ್ಟದ ವರೆಗೂ ತಗಲುವ ವೆಚ್ಚ (ಪ್ರೊಡಕ್ಷನ್ ಕಾಸ್ಟ್). ತಯಾರಿಕೆಯ ಘಟ್ಟದಲ್ಲಿ, ಆಡಳಿತ ಘಟ್ಟದಲ್ಲಿ, ಸರಕು ಮಾರಾಟ ಮತ್ತು ವಿತರಣೆಯ ಘಟ್ಟಗಳಲ್ಲಿ, ತಗಲುವ ಒಟ್ಟು ವೆಚ್ಚವನ್ನು ನಿಯಂತ್ರಿಸುವ ಹಾಗೂ ಕಡಿಮೆ ಮಾಡುವ ದೃಷ್ಟಿಯಿಂದ ಒಟ್ಟು ವೆಚ್ಚವನ್ನು ಅನೇಕ ಭಾಗಗಳಾಗಿ ವಿಂಗಡಿಸಿರುತ್ತಾರೆ. ಪ್ರತ್ಯಕ್ಷ ಸಾಮಗ್ರಿ (ಡೈರೆಕ್ಟ್ ಮೆಟೀರಿಯಲ್), ಪ್ರತ್ಯಕ್ಷ ಶ್ರಮ (ಕೂಲಿ) ಮತ್ತು ಪ್ರತ್ಯಕ್ಷ ಖರ್ಚುಗಳು ಮೂಲ ವೆಚ್ಚವೆಂದೂ (ಪ್ರೈಮ್ ಕಾಸ್ಟ್) ಪರೋಕ್ಷ ಸಾಮಗ್ರಿ, ಪರೋಕ್ಷ ಶ್ರಮ ಮತ್ತು ಪರೋಕ್ಷ ಖರ್ಚುಗಳು ಮೇಲುವೆಚ್ಚವೆಂದೂ (ಕಾಸ್ಟ್ ಓವರ್ ಹೆಡ್) ವಿಂಗಡಿಸಲಾಗಿದೆ.

	ಸರಕು ತಯಾರಿಕೆಯ ಘಟ್ಟದಲ್ಲಿ ಸಂಭವಿಸಿದ ಮೇಲುವೆಚ್ಚವನ್ನು ಉತ್ಪಾದನ ಮೇಲುವೆಚ್ಚವೆಂದೂ (ವಕ್ರ್ಸ್ ಆನ್-ಕಾಸ್ಟ್) ಆಡಳಿತ ಸಂಬಂಧವಾಗಿ ಮಾಡಿದ ಮೇಲುವೆಚ್ಚವನ್ನು ಆಡಳಿತ ಮೇಲುವೆಚ್ಚವೆಂದೂ ಮಾರಾಟದ ಘಟ್ಟದಲ್ಲಿ ಮಾಡಿದ್ದನ್ನು ವಿಕ್ರಯ ಮೇಲುವೆಚ್ಚವೆಂದೂ ಸರಕು ವಿತರಣೆಯ ಘಟ್ಟದಲ್ಲಾದದ್ದನ್ನು ವಿತರಣ ಮೇಲುವೆಚ್ಚವೆಂದೂ ವಿಂಗಡಿಸಲಾಗಿದೆ. ಉತ್ಪಾದನ ಮೇಲುವೆಚ್ಚದಲ್ಲಿ ಸರಕಿನ ತಯಾರಿಕೆಗೆ ಬೇಕಾಗುವ ಪರೋಕ್ಷ ಸಾಮಗ್ರಿ, ಪರೋಕ್ಷ ಶ್ರಮ ಮತ್ತು ಪರೋಕ್ಷ ಖರ್ಚುಗಳು ಅಡಕವಾಗಿರುತ್ತವೆ.

	ಉತ್ಪಾದನ ವೆಚ್ಚದಲ್ಲಿ ಮೂಲ ವೆಚ್ಚಗಳೂ ಉತ್ಪಾದನ ಮೇಲುವೆಚ್ಚಗಳೂ ಉತ್ಪಾದನೆಯ ಘಟ್ಟದ ವರೆಗೂ ತಗಲಿದ ಆಡಳಿತ ಮೇಲುವೆಚ್ಚಗಳೂ ಅಡಕವಾಗಿರುತ್ತವೆ. ಪ್ರತ್ಯಕ್ಷ ಸಾಮಗ್ರಿ+ಪ್ರತ್ಯಕ್ಷ ಶ್ರಮ+ಪ್ರತ್ಯಕ್ಷ ಖರ್ಚು=ಮೂಲ ವೆಚ್ಚ. ಮೂಲ ವೆಚ್ಚ+ಉತ್ಪಾದನ ಮೇಲುವೆಚ್ಚ +ಉತ್ಪಾದನೆಯ ಘಟ್ಟದವರೆಗಿನ ಆಡಳಿತ ಮೇಲುವೆಚ್ಚ=ಉತ್ಪಾದನ ವೆಚ್ಚ.			 
 (ಎ.ಕೆ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ